ರಾಹುಲ
ಗೌತಮ ಬುದ್ಧನ ಮಗ. ರಾಹುಲ ಎಂದರೆ ಬಂಧನ ಎಂದರ್ಥ. ಮಗ ಜನಿಸಿದನೆಂಬ ವಾರ್ತೆ ತಿಳಿದೊಡನೆ ಇದೊಂದು ಹೊಸ ಬಂಧನ ಎಂದು ಭಾವಿಸಿದ ಸಿದ್ಧಾರ್ಥ ಸಂಸಾರ ತ್ಯಜಿಸಲು ನಿರ್ಧರಿಸಿದ. ಅಂದೇ ಅರಮನೆ ಬಿಟ್ಟು ತೆರಳಿದ. ಬುದ್ಧನಾಗಿ ಕಪಿಲವಸ್ತುವಿಗೆ ಪ್ರಥಮ ಬಾರಿ ಭೇಟಿ ನೀಡಿದಾಗಲೇ ತಂದೆ-ಮಗನ ಸಮಾಗಮವಾದದ್ದು.
ಈತ ಬುದ್ಧನ ಶಿಷ್ಯರಲ್ಲೊಬ್ಬನಾದ. ತಂದೆಯಿಂದಲೇ ಆಗಾಗ ಆನಂದವನದಲ್ಲಿ ಏಕಾಂತಬೋಧೆ ಪಡೆಯುತ್ತಿದ್ದ. ಕೊನೆಗೆ ಅರ್ಹಂತ ಸ್ಥಾನವನ್ನೂ ಹೊಂದಿದ, ಈತನ ಶ್ರದ್ಧೆ,  ವಿಧೇಯತೆ ಅಪಾರವಾದವು. ರಾಹುಲವಾದಸುತ್ತ ಎಂಬುದು ವಿನೋದಕ್ಕೂ ಅಸತ್ಯ ನುಡಿಯಬಾರದು ಎಂದು ತಿಳಿಸುತ್ತದೆ. ಈತ ಬುದ್ಧನಿಗಿಂತಲೂ ಮೊದಲೆ ಕಾಲವಾದನೆಂದು ಬೌದ್ಧಗ್ರಂಥಗಳಿಂದ ತಿಳಿದುಬರುತ್ತದೆ. ದೇವದತ್ತ, ಅಂಗುಲಿಮಾಲ, ಧರ್ಮಪಾಲ ಇವರಿಗೆ ತೋರುತ್ತಿದ್ದ ಪ್ರೀತಿಯನ್ನೇ ಸ್ವಂತ ಮಗನಾದ ರಾಹುಲನಿಗೂ ಬುದ್ಧ ತೋರಿಸುತ್ತಿದ್ದ.	
(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ